ಕೇರಳ ಕೇಸರಿ

ಕೇರಳದಲ್ಲಿ 1924ರಲ್ಲಿ ಆರಂಭವಾಗಿ 1926ರಲ್ಲಿ ನಿಂತು ಹೋದ ಮಲಯಾಳಂ ವಾರಪತ್ರಿಕೆ. ಇದರ ಉಗಮ, ಚಾಲನೆ ಮತ್ತು ಅಂತ್ಯಗಳು ಕೇರಳದ ವೃತ್ತಪತ್ರಿಕೆಗಳ ಇತಿಹಾಸದಲ್ಲಿ ಒಂದು ಉಜ್ವಲ ಅಧ್ಯಾಯ. ಆಗಿನ ಪರಿಸ್ಥಿತಿಯಲ್ಲಿ ಕೇರಳ ಕೇಸರಿ ತಳೆದ ಧೋರಣೆಯಿಂದಾಗಿ ಅದಕ್ಕೆ ಶಾಶ್ವತ ಕೀರ್ತಿ ಲಭ್ಯವಾಯಿತು. 500 ಪ್ರತಿಗಳ ಪ್ರಸಾರದೊಂದಿಗೆ ಆರಂಭವಾಗಿ, ಅತ್ಯಂತ ಪ್ರಭಾವಶಾಲಿಯಾಗಿ ಪರಿಣಮಿಸಿ, ಕೇರಳದ-ಮುಖ್ಯವಾಗಿ ಮಲಬಾರ್ ಪ್ರದೇಶದ-ಸಾಮಾಜಿಕ ರಾಜಕೀಯ ಜೀವನದ ಮೇಲೆ ತನ್ನ ಶಾಶ್ವತ ಮುದ್ರೆಯನ್ನೊತ್ತಿ ಮರೆಯಾಯಿತು.

	ಪತ್ರಿಕೆಯ ಪ್ರಕಟಣೆ ಆರಂಭವಾದ್ದು ಉತ್ತರ ಮಲಬಾರಿನ ಹಿಂದುಳಿದ ಪಟ್ಟಣಗಳಲ್ಲೊಂದಾದ ಬಡಗಾರದಲ್ಲಿ. ಕೇರಳದ ಹುಚ್ಚರ ವ್ಯವಸ್ಥೆ ಎಂದು ಕುಖ್ಯಾತಿ ಪಡೆದಿದ್ದ ಸಮಾಜವಿರೋಧಿ ಬಲಗಳನ್ನು ಪ್ರತಿಭಟಿಸುವುದೇ ಪತ್ರಿಕೆಯ ಉದ್ದೇಶವೆಂಬುದು ಅದರ ಸ್ಥಾಪಕ-ಸಂಪಾದಕ ಮೊಯಾರತ್ ಶಂಕರನ್ ಮಾಡಿದ ಘೋಷಣೆ. ಅಸ್ಪøಶ್ಯತೆ, ಉತ್ತಮ ಕುಲಜರಿಂದಲೂ ದೊಡ್ಡ ಭೂಮಾಲೀಕರಿಂದಲೂ ನಡೆಯುತ್ತಿದ್ದ ದೀನದಲಿತರ ಶೋಷಣೆ-ಇವುಗಳ ವಿರುದ್ಧವಾಗಿ ಪತ್ರಿಕೆ ನಿರ್ದಾಕ್ಷಿಣ್ಯವಾಗಿ ಹೋರಾಟ ನಡೆಸಿತು. ಭಾಗ್ಯವಂತರೆನಿಸಿಕೊಂಡ ಅಲ್ಪಸಂಖ್ಯಾತರ ಹೆಸರಿನಲ್ಲಿ ಉನ್ನತ ಆದರ್ಶಗಳ ಘೋಷಣೆ ಮಾಡುತ್ತಿದ್ದವರನ್ನು ಪತ್ರಿಕೆ ಕಟುವಾಗಿ ಟೀಕಿಸಿತು. ಪಾನ ನಿರೋಧ ಚಳವಳಿಗೆ ಬೆಂಬಲ ನೀಡಿತು.

	ಸಮಾಜದ ಅನೇಕ ಗಣ್ಯರೂ ಪ್ರಭಾವಶಾಲಿಗಳೂ ಪತ್ರಿಕೆಗೆ ಬೆಂಬಲವಾಗಿ ನಿಂತರು. ಪೋಲೀಸರ ಮತ್ತು ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದರಲ್ಲಿ ಪತ್ರಿಕೆ ಹಿಂದೆ ಮುಂದೆ ನೋಡಲಿಲ್ಲ. ಉನ್ನತ ಪೋಲೀಸ್ ಅಧಿಕಾರಿಯೊಬ್ಬ ಅದರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಿ, ಬಹು ಭಾರಿ ಮೊತ್ತದ ಹಣದ ಪರಿಹಾರ ಕೇಳಿದ. ಕೋಳಿಕ್ಕೋಡಿನಲ್ಲಿ ಪತ್ರಿಕೆಯನ್ನು ಮುದ್ರಿಸುತ್ತಿದ್ದ ಮನೋರಮ ಮುದ್ರಣಾಲಯ ಅದನ್ನು ಅಚ್ಚು ಮಾಡಲು ಹೆದರಿತು. ಪ್ರಕಟಣೆ ಆರಂಭವಾದ ಆರು ತಿಂಗಳಲ್ಲಿಯೇ ಅದರ ಮುದ್ರಣಕಾರ್ಯ ಕಣ್ಣನ್ನೂರಿನ ಪ್ರಿನ್ಸ್ ಮುದ್ರಣಾಲಯಕ್ಕೆ ವರ್ಗವಾಗಬೇಕಾಯಿತು. ಆ ಮುದ್ರಣಾಲಯದವರೂ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ, ಅದರಲ್ಲೂ ಪೋಲೀಸರ, ಅಸಮಾಧಾನಕ್ಕೆ ಒಳಗಾಗಲು ಇಷ್ಟಪಡಲಿಲ್ಲವಾಗಿ ಅಲ್ಲಿಯೂ ಬಹುಕಾಲ ಪತ್ರಿಕೆಯನ್ನು ಅಚ್ಚು ಮಾಡಲಾಗಲಿಲ್ಲ. ಪತ್ರಿಕೆಯ ಕತ್ತು ಹಿಸುಕುವ ಇಂಥ ಪರಿಸ್ಥಿತಿಯಲ್ಲೂ ಅದು ಹೆದರಲಿಲ್ಲ. ಅದರ ಮುದ್ರಣ ಮತ್ತು ಪ್ರಕಾಶನಕ್ಕಾಗಿಯೇ ಬಡಗಾರದಲ್ಲಿ ಕೇರಳ ಕೇಸರಿ ಮುದ್ರಣ ಮತ್ತು ಪ್ರಕಾಶನ ಕಂಪನಿ ಎಂಬ ಸಂಸ್ಥೆ ಸ್ಥಾಪಿತವಾಯಿತು. ಮಲಬಾರಿನ ಕಾಂಗ್ರೆಸ್ ಚಟುವಟಿಕೆಗಳಿಗೆ ಈ ಮುದ್ರಣಾಲಯವೊಂದು ಮುಖ್ಯ ಕೇಂದ್ರವಾಗಿ ಪರಿಣಮಿಸಿತು. ವೈಕ್ಕಂ ಸತ್ಯಾಗ್ರಹ ಕಾಲದಲ್ಲಿ ಆ ಚಳವಳಿಯ ಪರವಾಗಿ ಸಾರ್ವಜನಿಕಾಭಿಪ್ರಾಯವನ್ನು ರೂಪಿಸುವ ಕಾರ್ಯದಲ್ಲಿ ಪತ್ರಿಕೆ ವಹಿಸಿದ ಪಾತ್ರ ಪ್ರಮುಖವಾದ್ದು.

	ಇಷ್ಟಾದರೂ ಪತ್ರಿಕೆ ಚಿರಾಯುವಾಗಿ ಬಾಳಲಿಲ್ಲ. ಅತ್ಯಂತ ಜನಪ್ರಿಯವಾಗಿ, ಪ್ರಭಾವಶಾಲಿಯಾಗಿ ಬದುಕಿದ ಆ ಪತ್ರಿಕೆಯ ಅಂತ್ಯಕ್ಕೆ ಕಾರಣವಾದ್ದು ಹಣದ ಮುಗ್ಗಟ್ಟಲ್ಲ. ಅದರ ತೀವ್ರ ಧೋರಣೆ, ರಾಜಕೀಯ ಸಾಮಾಜಿಕ ವಿಚಾರಗಳಲ್ಲಿ ನಿರ್ದಾಕ್ಷಿಣ್ಯಪರ ಅಭಿಪ್ರಾಯ-ಇವುಗಳಿಂದಾಗಿ ಅದು ಬಹು ಕಾಲ ಬಾಳಲಾಗಲಿಲ್ಲ. ಸಾಮಾನ್ಯನಿಗೆ ನ್ಯಾಯ ದೊರಕಿಸುವ ಹೋರಾಟದಲ್ಲಿ ಕೊನೆಗೆ ಪತ್ರಿಕೆಯೇ ಬಲಿಯಾಯಿತು.     							
	(ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ